Monday, May 31, 2010

ರವೀಂದ್ರನ ಬಗ್ಗೆ ಸ್ವಪ್ನಾ ರವರ ಬರಹದೊಂದಿಗೆ ಆರಂಭಿಸಿದ್ದೇವೆ.....

ಇತ್ತೀಚೆಗೆ ನಾ ಕಳುಹಿಸಿದ ಇ-ಮೇಲ್ ಗೆ ಬಂದ ಮೊದಲ ಪ್ರತಿಕ್ರಿಯೆ. ನನ್ನ ಮೇಲ್ ಓದಿದ ಅವರು ನನಗೆ ಕಾಲ್ ಮಾಡಿ ತುಂಬ ಹೊತ್ತು ಮಾತನಾಡಿದರು. ನನ್ನ ಪ್ರಯತ್ನಕ್ಕೆ ತಾವು ಸಾಥ್ ನೀಡುವುದಾಗಿ ಹೇಳಿದರು. ನಾನೂ ಸಹ ರವೀಂದ್ರ ಸರ್ ಬಗ್ಗೆ ಬರೆಯುತ್ತೇನೆ, ಆದಷ್ಟು ಬೇಗ ನಿಮಗೆ ಮೇಲ್ ಮಾಡ್ತೇನೆ ಸರ್ ಅಂತ ಹೇಳಿದವರು ಆತ್ಮೀಯರೂ ಹಾಗೂ ಕಸ್ತೂರಿಯ ನ್ಯೂಸ್ ರೀಡರ್ ಸ್ವಪ್ನ. ಅವರ ಈ ಪ್ರತಿಕ್ರಿಯೆಯಿಂದಲೇ ಗೆಳೆಯ ರವೀಂದ್ರನ ಕುರಿತು ಬರವಣಿಗೆ ಆರಂಭವಾಗಲಿದೆ. ಅವರು ಕಳುಹಿಸಿದ ಇ-ಮೇಲ್ ಅನ್ನು ಯಥಾವತ್ತಾಗಿ ಪ್ರಕಟಿಸಿದ್ದೇನೆ.ಸ್ವಪ್ನ ಮೇಡಂಗೆ ಧನ್ಯವಾದಗಳು. - ಸಿದ್ದೇಶ್
-----------------

ಮೊನ್ನೆ ಸಿದ್ದೇಶ್ ಸರ್ ಒಂದು ಇ ಮೇಲ್ ಕಳಿಸಿದ್ರು. ನನ್ನ ಬ್ಲಾಗ್ ಗೆ ವಿಸಿಟ್ ಕೊಟ್ಟು ಕಮೆಂಟ್ ಮಾಡಿ ಅಂತ ಬರೆದಿದ್ರು. ಅರೇ ಸಿದ್ದೇಶ್ ಸರ್ ಗೂ ಬ್ಲಾಗಿಂಗ್ ಜ್ವರ ಬಂತಾ ಅನ್ಕೊಂಡೇ ಅವ್ರು ಕಳಿಸಿದ್ದ ಲಿಂಕಿಗೆ ಕ್ಲಿಕ್ಕಿಸಿದೆ. ಮೊದಲ ನೋಟಕ್ಕೇ ಭಾರದ ನಿಟ್ಟುಸಿರು ಬಿಡುವಂತೆ ಮಾಡ್ತು ಅವರ ಬ್ಲಾಗೊಳಗೆ ಅಡಗಿದ್ದ ಸಂಗತಿ. ನಮ್ಮೆಲ್ಲರ ಪ್ರೀತಿಯ, ಆತ್ಮೀಯ ರವೀಂದ್ರ ಸರ್ ಮುಖದ ತುಂಬಾ ನಗು ಹೊತ್ತಿದ್ದ ಫೋಟೋ ಅಲ್ಲಿತ್ತು. ಅಲ್ಲಿಗೆ ಖಾತ್ರಿಯಾಯ್ತು. ಈ ಹಿಂದೆ ಸಿದ್ದೇಶ್ ಸರ್ ತುಂಬಾ ಸಲ ರವೀಂದ್ರನ ನೆನಪು ಎಲ್ಲರ ಮನಸಲ್ಲೂ ಅಚ್ಚಳಿಯದೇ ಉಳಿಯಬೇಕು ಮೇಡಮ್. ಅಂತಹ ಕೆಲಸ ನಾವೆಲ್ಲಾ ಸೇರಿ ಮಾಡೋಣ ಅಂತ ಹೇಳ್ತಾನೇ ಇದ್ರು. ಅದರ ಮೊದಲ ಹೆಜ್ಜೆಯನ್ನು ಈ ರೀತಿ ಇಟ್ಟಿದ್ದಾರೆ ಅಂತ ಗೊತ್ತಾಯ್ತು. ಸಿದ್ದೇಶ್ ಸರ್ ಅಗಲಿದ ಗೆಳೆಯನನ್ನು ಈ ಮೂಲಕ ಅರಸುತ್ತಿರುವ ಪಯಣದ ಹಾದಿಗೆ ನಾನೂ ನನ್ನಿಂದಾದಷ್ಟು ಹೆಜ್ಜೆಯಿಟ್ಟು ಸಾಥ್ ಕೊಡೋಣ ಅಂತ ತಕ್ಷಣ ನಿರ್ಧರಿಸಿದೆ. ಅದಕ್ಕಾಗೇ ರವೀಂದ್ರ ಸರ್ ಅವರ ಬಗ್ಗೆ ನನ್ನ ನೆನಪಿನ ಬುತ್ತಿಯಿಂದ ಈ ತುತ್ತು.

ಟಿವಿ9ಗೆ ಸೇರಿದ ಮೊದಲೆಲ್ಲಾ ಟೆಕ್ನಿಕಲ್ ವಿಷಯಗಳ ಬಗ್ಗೆ ನನಗೆ ಏನೇನೂ ಗೊತ್ತಿರ್ಲಿಲ್ಲ. ಹಾಗಾಗಿ ಪ್ರೋಮೋಗಳ ಬಗ್ಗೆ ಯಾರಾದ್ರೂ ಮಾತಾಡ್ತಿದ್ರೆ ಅದೇನಂತಲೇ ಗೊತ್ತಾಗ್ತಿರ್ಲಿಲ್ಲ. ಪ್ರೋಮೋ ಅಂದ್ರೇನು, ಯಾಕೆ ಮಾಡ್ತಾರೆ ಅಂತ ಗೊತ್ತಾಗೋಕೆ ಕೆಲದಿನಗಳೇ ಬೇಕಾದವು. ಆಗ ಎಲ್ಲರೂ ಓಹ್ ರವೀಂದ್ರ ಇಲ್ಲಿಗೆ join ಆಗ್ತಿದ್ದಾನಾ? ಸೂಪರ್! ಕೆಲಸದಲ್ಲಿ ಅವನನ್ನು ಮೀರಿಸೋರಿಲ್ಲ ಬಿಡಪ್ಪಾ, work ಅಂದ್ರೆ ಅಷ್ಟು dedicated ಅಂತ ಮಾತಾಡ್ತಿದ್ದದ್ದನ್ನು ಎಷ್ಟೋ ಸಲ ಕೇಳಿದ್ದೆ. ಆದ್ರೆ ಯಾರೀ ರವೀಂದ್ರ ಅಂತ ಗೊತ್ತೇ ಇರ್ಲಿಲ್ಲ.

ಅದೊಂದು ದಿನ ನಾನು ನನ್ನ ಸಹೋದ್ಯೋಗಿಗಳೊಂದಿಗೆ ನ್ಯೂಸ್ ರೀಡಿಂಗ್ ಪ್ರಾಕ್ಟೀಸ್ ರೆಕಾರ್ಡಿಂಗ್ ನಲ್ಲಿ ಮಾಡೋದ್ರಲ್ಲಿ ಮುಳುಗಿಹೋಗಿದ್ದೆ. ಆ ಕೋಣೆಗೆ ದಿವಾಕರ್ ಜೊತೆ ಇಬ್ಬರು ಬಂದರು. ನನಗಂತೂ ಅವರನ್ನು ಹಿಂದೆಂದೂ ನೋಡಿದ ನೆನಪೇ ಇರ್ಲಿಲ್ಲ. ಆದ್ರೆ ನಾನು ತುಂಬಾ ಪರಿಚಿತಳು ಅನ್ನೋ ಥರ ತುಂಬು ನಗೆಯೊಂದಿಗೇ ಅವರು ಪರಿಚಯ ಮಾಡಿಕೊಂಡ್ರು. ಅದು ಮತ್ಯಾರೂ ಅಲ್ಲ, ಅದೇ ನಮ್ ರವೀಂದ್ರ ಸರ್ ಮತ್ತೆ ಸಿದ್ದೇಶ್ ಸರ್! ಹೈದ್ರಾಬಾದಿಂದ ಬಂದಿದ್ರು. ಬಹುಶಃ ಟಿವಿ9 ನಲ್ಲಿನ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಬಂದಿದ್ರೇನೋ. ಹೊರಡುವ ಮುನ್ನ ಅದೇ ತುಂಬು ನಗೆಯೊಂದಿಗೆ bye ಹೇಳಿಹೊರಟರು. ಆ ಕ್ಷಣ ಈಗಲೂ ನನ್ನ ಕಣ್ಣಲ್ಲಿ ಕಟ್ಟಿದಂತಿದೆ. ಎಲ್ಲರಂತೆ ಹೊಸ ಆಫೀಸು, ಆಡ್ಜೆಸ್ಟ್ ಆಗ್ಬೇಕು, ಸ್ವಲ್ಪ ದಿನ ಆರಾಮಾಗಿರೋಣ ಅನ್ನೋ ಜಾಯಮಾನವೇ ಅವರದ್ದಲ್ಲ. ಅದೆಲ್ಲಾ ನಮಗೆ ಮುಂಚೆ ಗೊತ್ತೇ ಆಗ್ತಿರ್ಲಿಲ್ಲ. ದಿನಗಳೆದಂತೆ ನಾವೆಲ್ಲಾ ಒಬ್ಬರಿಗೊಬ್ಬರು ಅದೆಷ್ಟು ಆತ್ಮೀಯರಾಗಿಬಿಟ್ವಿ.

ನಿಜಕ್ಕೂ ಹೇಳಬೇಕಂದ್ರೆ ಆಗೆಲ್ಲಾ ಆಫೀಸಿನಲ್ಲಿ ವಾತಾವರಣ ಸಹಜವಾಗೇ ತುಂಬಾ ಸ್ನೇಹಮಯವಾಗಿರ್ತಿತ್ತು. ಏನಾದರೂ ಸಾಧಿಸಿ ತೀರಲೇಬೇಕೆಂಬ ಹಟ ಒಳಗೊಳಗೇ ಎಲ್ಲರಿಗೂ ಇದ್ದದ್ದು ಮತ್ತು ಆ ಸಾಧಿಸುವ ಗುರಿ ಒಂದೇ ಆಗಿದ್ದರಿಂದಲೋ, ಅದು ಆಫೀಸ್ ಅನ್ನೋದಕ್ಕಿಂದ ಮತ್ತೊಂದು ಮನೆ ಎಂಬಂತೆ ಫೀಲ್ ಆಗ್ತಿದ್ದದ್ದು ಸುಳ್ಳಲ್ಲ. ರವೀಂದ್ರ ಸರ್ ಕೆಲಸದ ವಿಷಯದಲ್ಲಿ ತುಂಬಾ ಪರ್ಟಿಕ್ಯುಲರ್, ಪಕ್ಕಾ ಪ್ರೊಫೆಷನಲ್ ಮನುಷ್ಯ ಅಂತೆಲ್ಲಾ ಕೇಳಿದ್ದಿತ್ತು. ಅದು ನನಗೆ ಮೊದಲ ಸಲ ಅನುಭವವಾಗಿದ್ದು ಜಸ್ಟ್ ಬೆಂಗಳೂರು ನ್ಯೂಸ್ ಬುಲೆಟಿನ್ ಗೆ ಅವ್ರು ಪ್ರೋಮೋ ಶೂಟ್ ಮಾಡಿಸಿದಾಗ. ಆ ಅನುಭವವನ್ನು ನಾನು ಮುಂದಿನ ಲೇಖನದಲ್ಲಿ ಖಂಡಿತಾ ಹಂಚಿಕೊಳ್ತೇನೆ.
- ಸ್ವಪ್ನಾ